ಮುಂಗಡಪತ್ರ
ಮುಂಬರುವ ಒಂದು ಗೊತ್ತಾದ ಕಾಲಮಿತಿಯ ಆಯ ವ್ಯಯ ಅಂದಾಜು ಪಟ್ಟಿ ಅಂದರೆ ನಿರ್ದಿಷ್ಟ ಕಾಲಾವಧಿಯಲ್ಲಿ ಬರುವ ಸಂಪನ್ಮೂಲಗಳನ್ನು ಇರುವ, ಬರುವ, ಬರಬಹುದಾದ ಎಲ್ಲ ವೆಚ್ಚಗಳನ್ನು ನಿಭಾಯಿಸಲು ಉಪಯೋಗಿಸಲು ಮಾಡುವ ಲೆಕ್ಕಾಚಾರದ ಅಂದಾಜು ಪಟ್ಟಿಯೇ ಮುಂಗಡ ಪತ್ರವಾಗಿದೆ. ಇದರಲ್ಲಿ ಆದಾಯದ ಮೂಲವನ್ನು ಗುರುತಿಸುವುದರ ಜೊತೆಗೆ ಖರ್ಚಿನ ವಿಧಾನವನ್ನೂ ಗುರುತಿಸುವುದು ಮುಖ್ಯ. ಪ್ರತಿಯೊಂದು ಕ್ಷೇತ್ರದಲ್ಲೂ, ಮನೆಯಲ್ಲೂ ಅಂದಾಜು ಪಟ್ಟಿಯ ಅವಶ್ಯಕತೆ ಇದ್ದೇ ಇದೆ. ವ್ಯಕ್ತಿಗತವಾಗಿ, ಒಂದು ಸಂಸ್ಥೆಗಾಗಿ ಅಥವಾ ಒಂದು ಕಂಪನಿಗಾಗಿ ಮಾಡುವ ಈ ಅಂದಾಜು ಪಟ್ಟಿಯಿಂದ ಒಳಪಡುವ ವರ್ಗವು ಚಿಕ್ಕದಾಗೇ ಇರುತ್ತದೆ. ಆದರೆ ರಾಜ್ಯ ಸರ್ಕಾರಗಳು ಮಾಡುವ ಈ ಅಂದಾಜು ಪಟ್ಟಿಯಿಂದಾಗಿ ಇಡೀ ರಾಜ್ಯ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅದರ ಪ್ರಭಾವ, ಪರಿಣಾಮಗಳಿಗೆ ಒಳಪಡುತ್ತಾರೆ. ಆದರೆ ಕೇಂದ್ರ ಸರ್ಕಾರವು ಮಾಡುವ ಮುಂಗಡ ಪತ್ರದ ಅಂದಾಜಿನಿಂದಾಗಿ ಇಡೀ ದೇಶವೇ ಇದರ ಪ್ರಭಾವ, ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಜೊತೆಗೆ ಕೇಂದ್ರದ ಮುಂಗಡಪತ್ರದಲ್ಲಿನ ಕೆಲವು ವಿಶೇಷ ನಿರ್ಧಾರಗಳನ್ನು ಹೊರ ರಾಷ್ಟ್ರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಕಾತುರದಿಂದ ಕಾಯುತ್ತಿರುತ್ತವೆ. ಹೀಗಾಗಿ ಮುಂಗಡ ಪತ್ರಕ್ಕೆ ಅದರದೇ ಆದ ವೈಶಿಷ್ಟ್ಯತೆ, ಪ್ರಾಮುಖ್ಯತೆ ಇದೆ. 

ಈ ಮುಂಗಡ ಪತ್ರದಲ್ಲಿನ ಆದಾಯವು ಹೆಚ್ಚಾಗಿದ್ದು ವ್ಯಯವು ಊಹಿತ ಆದಾಯಕ್ಕಿಂತ ಅಧಿಕವಾಗಿದ್ದರೆ ಅದು ವರಮಾನದ ಹೆಚ್ಚಳದ ಮುಂಗಡ ಪತ್ರ ವೆನಿಸಿಕೊಳ್ಳುತ್ತದೆ. ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲಿ ಒಟ್ಟಾರೆ ಬರುವ ಆದಾಯಕ್ಕಿಂತ ಆಗುವ ವೆಚ್ಚವು ಅಧಿಕವಾದಲ್ಲಿ ಅದು ಕೊರತೆಯ ಮುಂಗಡ ಪತ್ರ ಆಗುತ್ತದೆ. ಇದರ ಪರಿಣಾಮ ಆರ್ಥಿಕವಾಗಿ ಅಪಾಯಈ ಕೊರತೆಯನ್ನು ತುಂಬಲು ಸರ್ಕಾರವು ಆದಾಯದ ಎಲ್ಲ ಮೂಲಗಳನ್ನು ಶೋಧಿಸಿ ಕೊನೆಗೆ ಸಾಲದ ಮೊರೆ ಹೋಗಬೇಕಾಗುತ್ತದೆ. ಇದರಿಂದಾಗಿ ಅಂತರರಾಷ್ಟ್ರೀಯ ಸಂಸ್ಥೆಗಳು, ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರಕ್ಕೆ ಸಾಲದಾತನಾಗುವುದರ ಜೊತೆಗೆ ಆರ್.ಬಿ.ಐ. ಯು ಅಧಿಕ ಹಣ ಚಲಾವಣೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ. ಇದು ಕೊನೆಗೆ ಹಣದುಬ್ಬರದಲ್ಲಿ ಪರ್ಯವಸಾನಗೊಳ್ಳುತ್ತದೆ. ಇದು ದೇಶದ ಆರ್ಥಿಕ ಸ್ಥಿತಿಯ ಉತ್ತಮ ಲಕ್ಷಣವಲ್ಲ. ಆದರೆ ನಿವ್ವಳವಾಗಿ ಕೊರತೆಯ ಮುಂಗಡ ಪತ್ರವಾಗುತ್ತಿರುವುದೇ ಇತ್ತೀಚಿನ ವರ್ಷಗಳಲ್ಲಿ ಕೊರತೆಯ ಮುಂಗಡ ಪತ್ರವಾಗುತ್ತಿರುವುದೇ ಅಧಿಕವಾಗುತ್ತಿದೆ. 

ಸರ್ಕಾರದ ವೆಚ್ಚವನ್ನು ಸ್ಥೂಲವಾಗಿ ಮೂರು ಭಾಗವಾಗಿ ಮಾಡಬಹುದು. ಪೌರ ವ್ಯವಹಾರಗಳ ಖರ್ಚು. ರಕ್ಷಣಾ ವೆಚ್ಚ ಮತ್ತು ಸಹಾಯ ಧನಗಳು. ಇದರಲ್ಲಿ ಅಭಿವೃದ್ಧಿ ಖರ್ಚು, ಇತರ ಖರ್ಚುಗಳು ಸೇರಿವೆ. ಈ ಖರ್ಚುಗಳನ್ನು ಚಾಲ್ತಿ ಆದಾಯಗಳಿಂದ ತುಂಬಲಾಗುವುದು. ಆದರೆ ಬಂಡವಾಳ ಸಂಬಂಧಿತ ಖರ್ಚುಗಳನ್ನು ಸಾಲ ಮೊದಲಾದ ಇತರ ಆದಾಯಗಳಿಂದ ತುಂಬಿಕೊಳ್ಳಲಾಗುವುದು. ರೈಲ್ವೆ, ವಿಮಾನಯಾನ, ನೌಕೆ, ಅಂಚೆ ಮತ್ತು ತಂತಿ, ವಿದ್ಯುತ್ ಮೊದಲಾದ ಹಲವಾರು ನಿರ್ಮಾಣ ಯೋಜನೆಗಳು, ಇದರಲ್ಲಿ ಒಳಗೊಂಡಿವೆ.

ಆರ್ಥಿಕ ಬೆಳವಣಿಗೆಗೆ ಒತ್ತುಕೊಟ್ಟಂತೆ ಮಾಡಲೇ ಬೇಕಾದ ಹಲವಾರು ಕಾರ್ಯ ಕ್ರಮಗಳಿಗೆ ಸರ್ಕಾರ ವೆಚ್ಚ ಮಾಡಲೇಬೇಕಾಗುತ್ತದೆ. ಅನಿರೀಕ್ಷಿತ ಪ್ರಕೃತಿ ವಿಕೋಪ, ಅಫಘಾತ, ಆಕಸ್ಮಿಕ ಮೊದಲಾದವುಗಳಿಂದಾಗಿಯೂ ಸರ್ಕಾರದ ವೆಚ್ಚವು ಬೆಳೆಯುತ್ತದೆ.

ಈ ಮುಂಗಡ ಪತ್ರದ ಕಾರ್ಯಸಿದ್ಧತೆಯು ಮುಂಗಡ ಪತ್ರ ಮಂಡನೆಗೆ 5-6 ತಿಂಗಳುಗಳ ಮುಂಚೆಯೇ ಪ್ರಾರಂಭವಾಗುತ್ತದೆ. ಹಣಕಾಸು ಇಲಾಖೆಯು ಉಳಿದೆಲ್ಲ ಸಚಿವಾಲಯಗಳ ಕಛೇರಿಗಳಿಗೆ ಸೂಚನಾ ಪತ್ರ ಕಳಿಸಿ ಅವರ ಬೇಡಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನಿಂದ ಹಣಕಾಸಿನ ಸ್ಥಿತಿಗತಿ ಬಗ್ಗೆ ಸ್ಥೂಲವಾದ ಮಾಹಿತಿಯನ್ನು ತರಿಸಿಕೊಂಡು ಪ್ರಸ್ತುತ ಪರಿಸ್ಥಿತಿಗೆ ಪೂರಕವಾಗುವಂತೆ ಮುಂಗಡ ಪತ್ರದ ಕರಡು ಸಿದ್ಧವಾಗುತ್ತದೆ. ಈ ಕಾರ್ಯಕ್ಕಾಗಿ ಸಾವಿರಾರು ಜನರು ದುಡಿಯುತ್ತಾರೆ. ಕೊನೆಗೆ ವಿತ್ತ ಮಂತ್ರಿಗಳ ಕಛೇರಿಯಲ್ಲಿ ಮಾಹಿತಿಗಳನ್ನು ವಿಶ್ಲೇಷಿಸಿ, ಮಂಥಿಸಿ ಅಂತಿಮ ರೂಪ ಕೊಡುತ್ತಾರೆ. 
ಒಟ್ಟಿನಲ್ಲಿ ಭವಿಷ್ಯತ್ತಿನ ಒಂದು ಗೊತ್ತಾದ ಕಾಲಮಿತಿಯ ಆಯ ವ್ಯಯ ಅಂದಾಜುಪಟ್ಟಿ (ಬಜೆಟ್) ಸಂಪಾದಿತ ಹಣವನ್ನು ಸಮರ್ಪಕ ರೀತಿಯಲ್ಲಿ ವಿನಿಯೋಗಿಸುವ ಆರ್ಥಿಕ ಯೋಜನೆಯೆಂದೂ ಹೇಳಬಹುದು. ಇದರಲ್ಲಿ ಆಯದ ಮೂಲವನ್ನು ಅಗತ್ಯ ವ್ಯಯವಿಧಾನವನ್ನೂ ಗುರುತಿಸಲಾಗುವುದು. ಆಯವ್ಯಯ ಒಂದೇ ಸಮನಾಗಿರ ಬೇಕೆಂದೇನೂ ನಿರ್ಬಂಧವಿಲ್ಲದಿದ್ದರೂ ಆಯದ ಮಿತಿಯಲ್ಲಿ ವ್ಯಯವನ್ನು ತರಲು ಪ್ರಯತ್ನ ನಡೆಸುವ ಒಂದು ತೋರುಪಟ್ಟಿಯಾಗಿ ಇದನ್ನು ನಿರೂಪಿಸುವರು. ಪ್ರತಿಯೊಬ್ಬ ವ್ಯಕ್ತಿ, ಕುಟುಂಬ ವ್ಯಾಪಾರ ವಾಣಿಜ್ಯ ಸಮೂಹ, ಕೈಗಾರಿಕಾ ಘಟಕಗಳು, ಉದ್ಯಮಿಗಳು, ನಿಗಮಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ತಮ್ಮ ಮುಂಗಡ ಪತ್ರ ಹೊಂದಿರುವುವು. ಎಲ್ಲಕ್ಕೂ ಆಯಮಿತಿಯಿದ್ದು ವ್ಯಯವನ್ನು ಎಚ್ಚರಿಕೆಯಿಂದ ಮಾಡುವಲ್ಲಿ ಯಾವುದು ಪ್ರಥಮ ಮತ್ತು ಮುಖ್ಯ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಈ ನಿರ್ಧಾರ ಕೈಗೊಂಡು ಯೋಜನೆಯಂತೆ ಕ್ರಮಬದ್ಧವಾಗಿ ಕೆಲಸಮಾಡಲು ಈ ಆರ್ಥಿಕ ಮುಂಗಡಪತ್ರ ಸಹಾಯಮಾಡುತ್ತದೆ.

	ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ವಾರ್ಷಿಕ ಮುಂಗಡಪತ್ರವನ್ನು ತಯಾರಿಸಬಹುದು. ಅಥವಾ ಕುಟುಂಬದ ಯಜಮಾನನ ಸಂಬಳ ಸಾರಿಗೆ ಅವಲಂಬಿಸಿ ವಾರದ ಅಥವಾ ತಿಂಗಳಿನ ಆಯವ್ಯಯಪಟ್ಟಿಯನ್ನು ತಯಾರಿಸಬಹುದು. ಮುಂಗಡಪತ್ರ ಸಿದ್ಧಪಡಿಸುವಲ್ಲಿ ಪ್ರಥಮವಾಗಿ ಒಂದು ರಾಜ್ಯಕ್ಕೆ ಅಥವಾ ಒಬ್ಬ ವ್ಯಕ್ತಿಗೆ ಬರುವ ಒಟ್ಟು ಅದಾಯವನ್ನು ಅಂದಾಜು ಮಾಡುವರು. ಈ ನಿರೀಕ್ಷಿತ ಆದಾಯ ನಾನಾ ರೀತಿಯಾಗಿರುತ್ತದೆ. ಸಂಬಳದಿಂದ, ವ್ಯಾಪಾರ ಹಾಗೂ ಸೇವೆ ಸಲ್ಲಿಸುವುದರಿಂದ, ಬಾಡಿಗೆ, ಬಡ್ಡಿ ಮುಂತಾದವುಗಳಿಂದ, ಸರ್ಕಾರಕ್ಕೆ ಅದು ವಿಧಿಸುವ ವಿವಿಧ ತೆರಿಗೆಗಳಿಂದ. ರಾಜ್ಯದ ಆಸ್ತಿಯಿಂದ. ಪ್ರಾಕೃತಿಕ, ಗಣಿ, ಉದ್ಯೋಗ. ವಿವಿಧ ಉತ್ಪತ್ತಿಗಳಿಂದ. ಆದಾಯದ ನಿರೀಕ್ಷಣೆ ಮಾಡುವಂತೆ ಅನಿರೀಕ್ಷಿತ ವ್ಯಯದ ಬಗ್ಗೆಯೂ ಮುಂಗಡಪತ್ರದಲ್ಲಿ ಧನಮೂಲ ಹುಡುಕಬೇಕಾಗುತ್ತದೆ. ಸಂಬಳ ಸಾರಿಗೆಯ ಗೊತ್ತಾದ ವರಮಾನದಲ್ಲಿ ಮುಂಗಡಪತ್ರ ರೂಪಿಸುವುದು ಸುಲಭ. ವ್ಯಾಪಾರ ವಾಣಿಜ್ಯ ಮುಂತಾದವುಗಳಲ್ಲಿ ಏರುಪೇರು ವರಮಾನದಲ್ಲಿ ಮತ್ತು ಇಷ್ಟೆ ಮೊತ್ತವೆಂದು ನಿಗದಿಪಡಿಸಲು ಆಗದ ವ್ಯವಹಾರದಲ್ಲಿ ಸಾಮಾನ್ಯವಾಗಿ ಹಿಂದಿನ ವರ್ಷದ ಆಯ ಮತ್ತು ವ್ಯಯದ ಮೇಲೆ ಹಾಗೂ ಅಧಿಕ ಆಯವ್ಯಯ ನಿರೀಕ್ಷಣೆಯಲ್ಲಿ ಮುಂದಿನ ಮುಂಗಡಪತ್ರ ತಯಾರಿಸುವುದುಂಟು.

	ಮುಂಗಡಪತ್ರದಲ್ಲಿ ವ್ಯಯದ ಅಂದಾಜನ್ನು ಪಟ್ಟಿಮಾಡಲು ಮೊದಲು ಶಾಶ್ವತವಾದ ಖರ್ಚುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಒಬ್ಬ ವ್ಯಕ್ತಿ ತನ್ನ ಕುಟುಂಬದ ಆಯವ್ಯಯಪಟ್ಟಿ ಮಾಡುವಾಗ ಪ್ರತಿತಿಂಗಳು ಆತ ಕೊಡಬೇಕಾಗಿರುವ ಬಾಡಿಗೆ, ಪ್ರತಿ ತಿಂಗಳ ಕಂತುಗಳು. ಸಾಲಗಳು, ಅಹಾರ, ಬಟ್ಟೆ, ಪ್ರಯಾಣದ ಖರ್ಚು ಹಾಗೂ ಮನರಂಜನೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವರ್ಷಕ್ಕೊಮ್ಮೆ ತಮ್ಮ ಒಟ್ಟು ಆಯವ್ಯಯದ ಅಂದಾಜುಪಟ್ಟಿಯನ್ನು ತಯಾರಿಸಿಕೊಂಡು ಅದರಲ್ಲಿ ಮುಖ್ಯವಾಗಿ ರಕ್ಷಣೆ, ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ಸಾಗಣೆ ಹಾಗೂ ಸಂಪರ್ಕ ಸಾಧನ. ವಿಜ್ಞಾನ ಹಾಗೂ ಸಮುದಾಯ ಅಭಿವೃದ್ಧಿ. ತಾಂತ್ರಿಕಕ್ಷೇತ್ರ ಮತ್ತು ಇನ್ನಿತರ ರಾಷ್ಟ್ರಗಳ ಸಹಾಯ ನೀಡಿಕೆ ಇವೆಲ್ಲವನ್ನು ಗಮನದಲ್ಲಿರಿಸಿಕೊಂಢು ತನ್ನ ಒಟ್ಟು ಆಯವನ್ನು ಯಾವುದಕ್ಕೆ ಎಷ್ಟು ವ್ಯಯ ಮಾಡಬೇಕೆಂಬುದನ್ನು ಅವುಗಳ ಅಗತ್ಯಯನ್ನವಲಂಬಿಸಿ ನಿರ್ಧರಿಸಲಾಗುವುದು. ಹೀಗೆ ತಯಾರಿಸಲಾದ ಮುಂಗಡ ಪತ್ರದಲ್ಲಿ ಸರ್ಕಾರಕ್ಕೆ ವಿವಿಧ ಮೂಲಗಳಿಂದ ಬರುವ ಆದಾಯ ಹಾಗೂ ಮಾಡಬೇಕಾಗಿರುವ ಒಟ್ಟು ಖರ್ಚು ಅದರ ಮೊತ್ತ ಇರುವುದಲ್ಲದೆ ಕಡಿಮೆ ಬೀಳುವ ಆದಾಯವನ್ನು ಸರಿತೂಗಿಸಲು ಸರ್ಕಾರ ಯೋಚಿಸಿರುವ ಹೊಸ ತೆರಿಗೆಗಳು ಇತ್ಯಾದಿಗಳಿದ್ದು ಅದನ್ನು ಕೇಂದ್ರ ಹಾಗೂ ರಾಜ್ಯಗಳು ತಮ್ಮ ತಮ್ಮ ಸಂಪತ್ತಿನಲ್ಲಿ ಹಾಗೂ ವಿಧಾನಸಭೆ, ವಿಧಾನಪರಿಷತ್ತಿನ ಮುಂದಿಟ್ಟು ಒಪ್ಪಿಗೆ ಪಡೆಯಬೇಕು. 
 
	ಒಂದು ಮುಂಗಡಪತ್ರವೆಂದರೆ ಅದರಲ್ಲಿ ಮೂರು ಮುಖ್ಯ ಕ್ರಿಯೆಗಳಿರುತ್ತವೆ. ಒಂದನೆಯದಾಗಿ ಆದಾಯದ ಗಣನೆ, ಎರಡನೆಯದು ಖರ್ಚಿನ ಅಂದಾಜು ಮತ್ತು ಮೂರನೆಯದು ಆರ್ಥಿಕ ಲೆಕ್ಕಪತ್ರಗಳನ್ನು ಇಡುವುದು. ಈ ಕ್ರಿಯೆ ಒಬ್ಬ ವ್ಯಕ್ತಿ ಒಂದು ಕುಟುಂಬ ಒಂದು ನಿಗಮ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಲ್ಲ ಹಂತದಲ್ಲೂ ಅನ್ವಯವಾಗುತ್ತದೆ. ಮೂರನೆಯ ಹಂತವಾದ ಲೆಕ್ಕಪತ್ರಗಳ ನಿಭಾವಣೆಯ ಜೊತೆಗೆ ಮುಂಗಡಪತ್ರದಲ್ಲಿ ಒದಗಿಸಿರುವ ಹಣ-ಮತ್ತು ಆಗಿನ ಖರ್ಚುಗಳ ಮೇಲೆ ಹತೋಟಿ ಹಾಗೂ ಎರಡನ್ನೂ ತೂಗಿಸಿಕೊಂಡು ಹೋಗುವುದು ಸೇರಿರುತ್ತದೆ-ಈ ಕೆಲಸ ಒಂದು ಗೊತ್ತಾದ ಕಾಲಕ್ಕೆ ಸೀಮಿತವಾಗಿರುತ್ತದೆ.

	ಒಂದು ರಾಷ್ಟ್ರದ ಮುಂಗಡಪತ್ರವೆಂದರೆ ಅ ದೇಶದ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳನ್ನು ಹಿಡಿತದಲ್ಲಿಡುವ ಮತ್ತು ಹೆಚ್ಚು ಉಪಯುಕ್ತವಾಗುವಂತೆ ಕ್ರಿಯಾಶೀಲತೆಗೆ ದೂಡುವ ಆರ್ಥಿಕಶಕ್ತಿ. ಮೊದಲನೆಯದಾಗಿ ಇಡೀ ದೇಶದ ಮೂಲ ಸಾಧನ ಸಂಪತ್ತಿನ ಉತ್ಪನ್ನವನ್ನು ಎಲ್ಲ ಹಂತದಲ್ಲೂ ಸಮನಾಗಿ ದೇಶದ ಪ್ರಜೆಗಳಿಗೆ ಎಟುಕುವ ರೀತಿ ಹಂಚುವ ಒಂದು ಸಾಧನ. ಎರಡನೆಯದಾಗಿ ದೇಶದ ಆರ್ಥಿಕ ಚಟುವಟಿಕೆಯ ನಿಯಂತ್ರಣ. ಸರ್ಕಾರ ವಿಧಿಸುವ ಅಥವಾ ರದ್ದುಪಡಿಸುವ ನಾನಾ ಬಗೆಯ ತೆರಿಗೆಗಳು ಕೆಲವು ಪರೋಕ್ಷವಾಗಿ ಮತ್ತೆ ಕೆಲವು ನೇರವಾಗಿ ದೇಶದ ಆರ್ಥಿಕ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತವೆ. ಸರ್ಕಾರ ತನ್ನ ನಾನಾ ಯೋಜನೆಗಳಿಗೆ ಅಧಿಕ ಖರ್ಚು ಮಾಡಿದರೆ ಅದೊಂದು ರೀತಿಯಲ್ಲಿ ಆರ್ಥಿಕ ಚಟುವಟಿಕೆಗೆ ಹೆಚ್ಚು ಒತ್ತುಕೊಟ್ಟಂತೆ ಆಗುತ್ತದೆ. ಈ ಬಗೆಯ ಆರ್ಥಿಕ ನಿಯಂತ್ರಣ ಮುಂಗಡ ಪತ್ರವನ್ನು ಮಾಡುತ್ತದೆ ಮತ್ತು ಮುಂದಿನ ಸ್ಥಿತಿಯ ಬಗ್ಗೆ ನಿರ್ಧರಿಸುತ್ತದೆ. ಮೂರನೆಯದಾಗಿ ಮುಂಗಡಪತ್ರ ದೇಶದ ಒಟ್ಟು ಉತ್ಪತ್ತಿಯನ್ನು ಉತ್ತಮರೀತಿಯಲ್ಲಿ ತನ್ನ ಎಲ್ಲ ಪ್ರಜೆಗಳಿಗೂ ವಿವಿಧ ರೂಪದಲ್ಲಿ ದೊರಕುವಂತೆ-ಹಂಚುವಂತೆ ಕೆಲಸ ಮಾಡುತ್ತದೆ. ಆರ್ಥಿಕ ಹಂತಗಳ ಏರುಪೇರುಗಳನ್ನು ನಿಯಂತ್ರಿಸುವುದರ ಜೊತೆಗೆ ಪ್ರಜೆಗಳ ಮಧ್ಯೆ ಇರುವ ಹೆಚ್ಚಿನ ಆರ್ಥಿಕ ಅಂತರವನ್ನು ಕಡಿಮೆಗೊಳಿಸುವ ಪ್ರಯತ್ನವೂ ಆಗಿರುತ್ತದೆ. ಒಟ್ಟಿನಲ್ಲಿ ಒಂದು ದೇಶದ ಮುಂಗಡಪತ್ತ ಆ ದೇಶದ ಆರ್ಥಿಕ. ಸಾಮಾಜಿಕ. ರಾಜಕೀಯ ಹಾಗೂ ಆದರ ಭದ್ರತೆಯ ಎಲ್ಲ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಬೇರೆ ದೇಶಗಳು ಇತ್ತೀಚೆಗೆ ಮುಂಗಡಪತ್ರದಲ್ಲಿ ರಕ್ಷಣೆಗೆ ಎಷ್ಟು ಖರ್ಚುಮಾಡುತ್ತವೆ ಎನ್ನುವುದನ್ನೇ ತಮ್ಮ ಪರಸ್ವರ ಸಂಬಂಧದ ಬಗ್ಗೆ ನಿರ್ಧರಿಸುವ ಆಲೋಚನೆ ಸಹ ಮಾಡುತ್ತವೆ. ಒಂದು ದೇಶದ ಮುಂಗಡಪತ್ರ ಆ ದೇಶದ ಪ್ರಗತಿಯ ಹಾಗೂ ಮುಂದಿನ ಭವಿಷ್ಯದ ಸೂಚಿಗಳಾಗಿರುತ್ತವೆ.

	ಭಾರತದಲ್ಲಿ ಕೇಂದ್ರ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತ್ಯೇಕವಾದ ಮುಂಗಡಪತ್ರಗಳನ್ನು ತಯಾರಿಸುತ್ತವೆ. ಯಾವುದಾದರೂ ರಾಜ್ಯ ರಾಷ್ಟ್ರಾಧ್ಯಕ್ಷರ ಆಡಳಿತಕ್ಕೆ ಒಳಪಟ್ಟಿದ್ದರೆ, ಆ ರಾಜ್ಯದ ಮುಂಗಡ ಪತ್ರವನ್ನು, ಕೇಂದ್ರದ ಶಾಸಕಾಂಗದಲ್ಲಿಯೇ ಮಂಡಿಸಿ ಅದಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ. ಭಾರತ ಹಣಕಾಸು ವರ್ಷ ಏಪ್ರಿಲ್ 1ರಿಂದ ಮುಂದಿನ ವರ್ಷದ ಮಾರ್ಚ್31ರ ತನಕ ಇರುವುದರಿಂದ ಮುಂಗಡಪತ್ರವನ್ನು ಫೆಬ್ರವರಿ ತಿಂಗಳಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಶಾಸಕಾಂಗಗಳಿಗೆ ಮಂಡಿಸುವತನಕ ಆಯ-ವ್ಯಯ ಮಾಹಿತಿಯನ್ನು ಗೋಪ್ಯವಾಗಿಡಲಾಗುತ್ತದೆ.

	ಮುಂಗಡಪತ್ರವನ್ನು ಕೇಂದ್ರದಲ್ಲಿ ಹಣಕಾಸು ಸಚಿವಾಲಯ ತಯಾರಿಸುತ್ತದೆ. ಈ ಸಚಿವಾಲಯ ಎಲ್ಲ ಸಚಿವಾಲಯಗಳ ಮತ್ತು ರಾಜ್ಯಗಳ ಮುಂದಿನ ವರ್ಷದ ವೆಚ್ಚ ವಿವರಣೆಯನ್ನೂ ವಿವಿಧ ಮೂಲಗಳಿಂದ ಎತ್ತಬಹುದಾದ ಆದಾಯ ಮೂಲಗಳನ್ನೂ ಪಡೆದುಕೊಳ್ಳುತ್ತದೆ. ಕೇಂದ್ರ ಬ್ಯಾಂಕಿನಿಂದ ಅಗತ್ಯವಿರುವ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ಪಡೆದುಕೊಳ್ಳುತ್ತದೆ. ಒಂದು ಪಕ್ಷ ಸರ್ಕಾರದ ಆದಾಯಕ್ಕಿಂತ ವೆಚ್ಚ ಹೆಚ್ಚಾದರೆ, ಅದನ್ನು ಹೇಗೆ ಸರಿತೂಗಿಸಬೇಕು ಎಂಬುದನ್ನು ವಿವೇಚಿಸಲಾಗುತ್ತದೆ. ಇಂಥ ಪರಿಶ್ರಮ ನಡೆದ ಮೇಲೆ ಅದನ್ನು ಅಂತಿಮವಾಗಿ ಶಾಸಕಾಂಗದ ಮುಂದೆ ಇಡಲಾಗುತ್ತದೆ. ಮಂಡಿಸಲಾಗುವ ಮುಂಗಡಪತ್ರದ ಮೇಲೆ ಶಾಸಕಾಂಗದಲ್ಲಿ ವ್ಯಾಪಕವಾದ ಚರ್ಚೆ ನಡೆಯುತ್ತದೆ. ಅಗತ್ಯಬಿದ್ದಲ್ಲಿ ಅನೇಕ ಬದಲಾವಣೆಗಳನ್ನು ಸಹ ಮಾಡಲಾಗುತ್ತದೆ.

	ಭಾರತ ಸರ್ಕಾರದ ಮುಖ್ಯ ಆದಾಯದ ಮೂಲ ತೆರಿಗೆಗಳು ಎನ್ನುವುದು ಸ್ಪಷ್ಟ. ಹಾಗೆಯೇ ಮುಖ್ಯ ವೆಚ್ಚದ ಬಾಬ್ತುಗಳೆಂದರೆ ರಕ್ಷಣೆ, ಬಡ್ಡಿ ಪಾವತಿಗಳು, ಆಹಾರ ಮತ್ತು ರಸಗೊಬ್ಬರಕ್ಕೆ ಸಹಾಯ ಧನ.

	ಕೇಂದ್ರ ಸರ್ಕಾರಕ್ಕೆ ಹೋಲಿಸಿದಂತೆ, ರಾಜ್ಯ ಸರ್ಕಾರಕ್ಕೆ ಇರುವ ಆದಾಯ ಮೂಲಗಳು ಬಹಳ ಕಡಿಮೆ. ಹೀಗಾಗಿ ತಮ್ಮ ವೆಚ್ಚಕ್ಕಾಗಿ ಕೇಂದ್ರ ಸರ್ಕಾರದ ಅನುದಾನವನ್ನು ರಾಜ್ಯಸರ್ಕಾರಗಳು ಅವಲಂಬಿಸುತ್ತವೆ.	
(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ